ನಮ್ಮ ಮಾತೃಭಾಷೆ ಕನ್ನಡ ಭಾಷೆ ಅದ್ಭುತ ಭಾಷೆ.👌👌
ಕನ್ನಡ ಶ್ರೀಮಂತ ಭಾಷೆ, ಕೇವಲ ' ಕ' ಅಕ್ಷರದಿಂದ ಇಷ್ಟು ಪದ ಉಪಯೋಗಿಸಬಹುದೇ ಎಂಬುದೇ ಆಶ್ಚರ್ಯ ಆದರೂ ಸತ್ಯ 👏👏👏👏👏👍👍👍👍👍
'ಕ'ಕಾರ ಕವನ
ಕನ್ನಡವ ಕಲಿಯುತಿರು ಕನ್ನಡದ ಕಂದನೇ |
ಕನ್ನಡವೆ ಕಾಯುವುದು ಕಾಪಿಡುವುದಂತೆ ||
ಕನ್ನಡಕೆ ಕಂಪುಂಟು ಕನ್ನಡಕೆ ಕಳೆಯುಂಟು |
ಕನ್ನಡದಿ ಕಲಿತಾಡು ಕೂಸೆ ಕಣ್ಮಣಿಯೆ ||
ಕನ್ನಡದ ಕೈಂಕರ್ಯ ಕಡುಭಾಗ್ಯ ಕಂಡವಗೆ |
ಕಾತರದಿ ಕಾದಿದ್ದು ಕಲಿಯುವಾತಂಗೆ ||
ಕರ್ತಾರ ಕಸವರವ ಕೈತುಂಬಿ ಕೊಟ್ಟಂತೆ |
ಕೊಡುತಿಹುದು ಕನ್ನಡವು ಕೈಚಾಚು ಕೂಸೆ ||
ಕೇಳಿದ್ದು ಕೊಡುವಂಥ ಕಲ್ಪತರು ಕನ್ನಡವು |
ಕರುನಾಡಲಿರುವವರು ಕಲಿಯಬೇಕಿದನು ||
ಕಲಿತಷ್ಟು ಕಡಲಾಳ ಕಂಡಷ್ಟು ಕೋಮಲತೆ |
ಕಲಿಯುವೆಯ ಕಾಣುವೆಯ ಕರುನಾಡ ಕೂಸೆ ||
ಕೋಟೆ ಕೊತ್ತಲವಿಹುದು ಕಡಲು ಕಂದಕವಿಹುದು |
ಕಾಡು ಕಟ್ಟಡ ಕಿಲ್ಲೆ ಕಾಣಲಿಲ್ಲುಂಟು ||
ಕಾವೇರಿ ಕಣಿವೆಯನು ಕರ್ದಮಿತ ಕವಲನ್ನು |
ಕಾಂಬಾಸೆ ಕನಸಲ್ಲು ಕೇಳೆನ್ನ ಕೂಸೆ ||
ಕಪಿಲೆನದಿ ಕೊಡಚಾದ್ರಿ ಕಾಡುಮಲೆ ಕಡಲಾಮೆ |
ಕೊಲ್ಲೂರು ಕಾಗಿನೆಲೆ ಕೃಷ್ಣೆ ಕಾವೇರಿ ||
ಕೋಲಾರ ಕುಪ್ಪಳ್ಳಿ ಕೊಡಗು ಕಾಕನಕೋಟೆ |
ಕರ್ನಾಟಕದ ಕಳಸ ಕಾಣೋಣ ಕೂಸೆ ||
ಕಾರ್ಮೋಡ ಕಾರಿರುಳು ಕರಿನೆರಳು ಕಪ್ಪುಂಟು |
ಕಪ್ಪೇನು ಕಸವಲ್ಲ ಕರಿಕೃಷ್ಣ ಕಾಂತಿ ||
ಕಸ್ತೂರಿ ಕಪ್ಪಂತೆ ಕಾರ್ಮುಗಿಲು ಕರಿಯಂತೆ |
ಕಾಳಿಂಗ ಕೃಷ್ಣನಿಗೆ ಕರಮುಗಿವ ಕೂಸೆ ||
ಕಾಡಿನಲಿ ಕೇಸರವು ಕಾಡಾನೆ ಕಿರುಬಗಳು |
ಕಾಡು ಕೋಣಗಳುಂಟು ಕೀಶ ಕರಡಿಗಳು ||
ಕರಿಜಾಲಿ ಕಲ್ಗರಿಗೆ ಕಾಸರಕ ಕೋಡಸಿಗ |
ಕಾಡಿನಲಿ ಕಾಣುವುವು ಕಾಣಿಸಿತೆ ಕೂಸೆ ||
ಕ್ರಿಮಿ ಕೀಟಗಳ ಕೂಟ ಕಾಣಬಹುದೆಲ್ಲೆಡೆಯು |
ಕೀಚಕ್ಕಿ ಕೋಗಿಲೆಯು ಕುರವಿ ಕೆಂಜಿರುವೆ ||
ಕೋಳಿ ಕುಕ್ಕುಟವುಂಟು ಕುರಿ ಕರುಗಳಿಲ್ಲುಂಟು |
ಕಾಣುವೆಯ ಕಣ್ಬಿಟ್ಟು ಕೂಸೆನ್ನ ಕೂಸೆ ||
ಕಮಲ ಕನಕಾಂಬರದ ಕುಸುಮ ಕುಲವಿಹುದಿಲ್ಲಿ |
ಕಾಮಲತೆ ಕೇದಗೆಯು ಕೆಂಗುಲಾಬಿಗಳು ||
ಕಣಗಿಲೆಯು ಕಾಕಡವು ಕಿಲಕಿಲನೆ ಕಿಸಿಯುತಿರೆ |
ಕುಳಿತು ಕಾಣೋಣವನು ಕುಳಿತುಕೋ ಕೂಸೆ ||
ಕೈಕಾಲು ಕಣ್ಣುಗಳು ಕಿವಿ ಕೆನ್ನೆ ಕೇಶಗಳು |
ಕುತ್ತಿಗೆಯು ಕರುಳುಗಳು ಕಲಿಜ ಕೀಲುಗಳು ||
ಕಾಳ್ಕಡ್ಡಿ ಕೂಳಿಗಿದೆ ಕುಡಿಯಲಿಕೆ ಕೆನೆಹಾಲು |
ಕಾಯ ಕೇವಲವಲ್ಲ ಕರುಳಕುಡಿ ಕೂಸೆ ||
ಕಾಲ್ಗೆಜ್ಜೆ ಕೇಯೂರ ಕೈಬಳೆಗೆ ಕಂಕಣವು |
ಕಾಲ್ಗಡಗ ಕಿವಿಯೋಲೆ ಕಂಠಿ ಕುತ್ತಿಗೆಗೆ ||
ಕಣ್ಕಪ್ಪು ಕಣ್ಗಳಿಗೆ ಕಟಿಗುಂಟು ಕಟಿಬಂಧ | ಕಿಂಕಾಪು ಕಾಯಕ್ಕೆ ಕೊಡುತಿರುವೆ ಕೂಸೆ ||
ಕೆಲವು ಕಸುಬುಗಳಿಹವು ಕರಕುಶಲ ಕರ್ಮಗಳು |
ಕ್ಷೌರಿಕರು ಕೃಷಿಕಾರ ಕುರಿಕಾಯ್ವ ಕುರುಬ ||
ಕುಂಬಾರ ಕಲ್ಕುಟಿಗ ಕಾರ್ಮಿಕರು ಕರಣಿಕರು |
ಕರುನಾಡಿಗಾಗಿವರು ಕೊಂಡಾಡು ಕೂಸೆ ||
ಕಜ್ಜಾಯ ಕರದಂಟು ಕೋಡುಬಳೆ ಕಾಕಂಬಿ |
ಕೋಸಂಬರಿಗಳಿಹವು ಕುರುಕಲಿಕೆ ಕಾಳು ||
ಕೂಟು ಕಷಾಯಗಳಿವೆ ಕರಿದ ಖಾರಗಳಿಹವು |
ಕೂಳಿದುವೆ ಕಾಯಕ್ಕೆ ಕುಳಿತುಣ್ಣು ಕೂಸೆ ||
ಕೆಲವುಂಟು ಕ್ರೀಡೆಗಳು ಕೋಲಾಟ ಕಲ್ಲಾಟ |
ಕಬಡಿ ಕಾಲ್ಚೆಂಡಾಟ ಕುಂಟಾಟ ಕೂಟ ||
ಕವಡೆ ಕಣ್ಮುಚ್ಚಾಲೆ ಕೇರಮ್ಮು ಕುಸ್ತಿಗಳು |
ಕೀಲ್ಗೊಂಬೆ ಕಥೆಯಾಟ ಕುಣಿದಾಡು ಕೂಸೆ ||
ಕಾವ್ಯಗಳು ಕಥನಗಳು ಕಾದಂಬರಿಯ ಕೋಠಿ |
ಕವಿಗೋಷ್ಠಿ ಕಿರುಚಿತ್ರ ಕರುನಾಡ ಕವಿತೆ ||
ಕವಿ ಕೋವಿದರ ಕಥನ ಕಲಾವಿದರುಗಳ ಕಲೆ |
ಕೋರೈಸುವಂತಿಹುದು ಕುಳಿತೋದು ಕೂಸೆ ||
ಕಬ್ಬಿಣದ ಕಡಲೆಯಿದು ಕನ್ನಡವು ಕಲಿಯಲಿಕೆ |
ಕಷ್ಟವಿದೆ ಕಠಿಣವಿದೆ ಕಲಿಯುವುದದೆಂತು? ||
ಕೇಳಿಹರು ಕೀಳಾಗಿ ಕಲಿಯಲೊಲ್ಲದ ಕುಜನ |
ಕೇಳ್ಬೇಡ ಕಟ್ಟುಕತೆ ಕುಸಿಯದಿರು ಕೂಸೆ ||
ಕೇಳಿಲ್ಲಿ ಕಟುಸತ್ಯ ಕಡಲೆಪುರಿ ಕುರುಕುವೊಲು |
ಕ್ಷಣದಲ್ಲೆ ಕರಗತವು ಕನ್ನಡವು ಕೂಸೆ ||
ಕುಳಿತಲ್ಲೆ ಕಲಿಯುತ್ತ ಕಲಿತೊಲಿದು ಕುಣಿಯುತ್ತ |
ಕುಣಿದು ಕೊಂಡಾಡುತ್ತ ಕಲಿವೆ ಕಲಿ ಕೂಸೆ ||
ಕನ್ನಡದ ಕಂದಗಳು ಕರುನಾಡ ಕೂಸುಗಳು |
ಕನ್ನಡವ ಕಲಿಯುತಿಹ ಕಲಿಗಳಿವರಂತೆ ||
ಕಲಿತೋದಿ ಕುಳಿತಾಡಿ ಕಾವ್ಯಕೃತಿ ಕೋದುತ್ತ |
ಕನ್ನಡವ ಕಾಪಾಡಿ ಕಾಯುತಿಹರಂತೆ ||
***
ಮಾಹಿತಿ ಸಂಗ್ರಹಣ ಮಾಡಿದವರಿಗೆ ಧನ್ಯವಾದಗಳು 🙏🏻
No comments:
Post a Comment