Saturday 27 August 2022

ನೆಮ್ಮದಿಯ ಗುಟ್ಟು


ಅಲ್ಲೊಂದು ಪುಟ್ಟ ಗುಡಿಸಲು. ಆರೆಂಟು ಜನರ ಸಂಸಾರ. ಕೂಲಿನಾಲಿ ಮಾಡಿ ಜೀವನ ಅವರ ಮುಖದಲ್ಲಿ ಸದಾ ಮಂದಹಾಸ, ಶ್ರಮವಹಿಸಿ ದುಡಿಯುತ್ತಿದ್ದಿದ್ದರಿಂದ ಸದೃಢ ಶರೀರವಿತ್ತು. ನಿತ್ಯ ಗಂಜಿ ಊಟವನ್ನೇ ಮಾಡಿದರೂ ಅವರೆಲ್ಲ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಗುಡಿಸಲ ಎದುರು ಭಾಗದಲ್ಲೊಂದು ಭವ್ಯ ಬಂಗಲೆ. ಸಿರಿತನದ ಎಲ್ಲ ವೈಭೋಗಗಳು ತುಂಬಿಕೊಂಡಿದ್ದರೂ ಮನೆಯ ಜನರ ಮೊಗದಲ್ಲಿ ಏನೋ ಅಸಂತುಷ್ಟಿ, ಮನೆಯಲ್ಲಿ ಯಾವಾಗಲೂ ಬಿಗುವಿನ ವಾತಾವರಣ. ಮನೆಯೊಡತಿಗೆ ಸದಾ ಮನದಲ್ಲಿ ಕಾಡುವ ಪ್ರಶ್ನೆಯೇನೆಂದರೆ, ‘ನಮಗೆ ಎಲ್ಲ ರೀತಿಯ ಐಶ್ವರ್ಯಗಳಿದ್ದರೂ ಈ ಅತೃಪ್ತಿ, ಅಸಮಾಧಾನ ಏಕೆ? ದಿನವಿಡೀ ಕೂಲಿ ಮಾಡಿದ್ರೂ ಆ ಗುಡಿಸಲಿನ ಜನ ಸಂತಸದಿಂದ ಹೇಗೆ ಇರುವರು?’ ಎಂದು.


ಹೀಗಿರುವಾಗ ಸಾಧುವೊಬ್ಬರು ಆಕೆಯ ಮನೆಗೆ ಬಂದರು. ಮನದಲ್ಲಿ ಕಾಡುತ್ತಿದ್ದ ಆ ಪ್ರಶ್ನೆಯನ್ನು ಸಾಧುಗಳಲ್ಲಿ ಹೇಳಿಕೊಂಡಳು. ಆಗ ಅವರು, ‘ತಾಯಿ, ನಿನ್ನ ಪ್ರಶ್ನೆಗೆ ಉತ್ತರಿಸುವ ಮೊದಲು ಒಂದು ಕೆಲಸ ಮಾಡು. ಇಂದಿನಿಂದ ಒಂದು ತಿಂಗಳುಕಾಲ ಆ ಬಡ ಜನರಿಗೆ ನಿತ್ಯವೂ ಮನೆಗೆ ಕರೆದು ಮೃಷ್ಟಾನ್ನ ಭೋಜನ ಹಾಕು, ನಂತರ ಅವರನ್ನು ಕರೆಯುವುದನ್ನು ನಿಲ್ಲಿಸಿ, ಮುಂದಿನ ಬೆಳವಣಿಗೆಯನ್ನು ಗಮನಿಸಿ ನನಗೆ ತಿಳಿಸು’ ಎಂದರು. ಅದರಂತೆ ಆ ಹೆಂಗಸು ತಿಂಗಳ ಕಾಲ ಮೃಷ್ಟಾನ್ನ ಭೋಜನವನ್ನು ಆ ಜನರಿಗೆ ಉಣಬಡಿಸಿದಳು. ಅವರೋ ಸಂತೋಷದಿಂದ ಬಂದು ಊಟ ಮಾಡಿ ಹೋಗುತ್ತಿದ್ದರು. ನಂತರ ಇದ್ದಕ್ಕಿದ್ದಂತೆ ಊಟ ಕೊಡುವುದನ್ನು ನಿಲ್ಲಿಸಿ ಬಿಟ್ಟಳು.


ಆಶ್ಚರ್ಯವೆಂಬಂತೆ ಇಷ್ಟುದಿನ ಖುಷಿಯಿಂದಿರುತ್ತಿದ್ದ ಅವರಲ್ಲಿ ಏನೋ ಒಂದು ರೀತಿಯ ಬೇಸರದ ಭಾವನೆ ಕಾಣತೊಡಗಿತು. ಉಚಿತವಾದ ಭೋಜನದ ಸವಿ ಕಂಡ ಅವರಿಗೆ ಈಗ ನಿತ್ಯದ ಊಟ ಸಪ್ಪೆ ಎನಿಸತೊಡಗಿತು. ದುಡಿಮೆ ಮರೆತ ಶರೀರ ಕೃಶವಾಗತೊಡಗಿತು. ‘ಅಯ್ಯೋ ದಿನಾಲೂ ಇಂಥ ಊಟ ಸವಿಯುವ ಭಾಗ್ಯ ನಮಗಿಲ್ಲವಲ್ಲ’ ಎಂಬ ಕೊರಗು ಅವರನ್ನು ಆವರಿಸಿಬಿಟ್ಟಿತು. ಇದನ್ನೆಲ್ಲ ಗಮನಿಸಿದ ಆ ಹೆಂಗಸು ಸಾಧುಗಳಲ್ಲಿ ವಿಷಯ ತಿಳಿಸಿದಾಗ ಅವರು, ‘ನಿನ್ನ ಪ್ರಶ್ನೆಗೆ ಉತ್ತರ ಇಲ್ಲಿಯೇ ಇದೆ. ಮೊದಲು ಇದ್ದುದ್ದರಲ್ಲಿಯೇ ಅವರು ತೃಪ್ತರಾಗಿದ್ದರು. ಆದ್ದರಿಂದ ಸದಾ ಸಂತಸದಿಂದಿರುತ್ತಿದ್ದರು. ಈಗ ಬೇರೆಯವರನ್ನು ನೋಡಿ ತಮಗಿಲ್ಲವಲ್ಲ ಎಂಬ ಕೊರಗು ಅವರನ್ನು ಕಾಡುತ್ತಿರುವುದರಿಂದ ನಗು ಮಾಯವಾಗಿದೆ. ಅದಕ್ಕೇ ಹಿರಿಯರು, ‘ಸಂತೃಪ್ತಿಯೇ ಸುಖಕ್ಕೆ ಕಾರಣ’ ಎಂದು ಹೇಳಿರುವುದು. ಆದ್ದರಿಂದಲೇ ನಾವು ನಮ್ಮನ್ನು ಬೇರೆಯವರಿಗೆ ಹೋಲಿಸಿಕೊಳ್ಳದೆ ಇದ್ದುದ್ದರಲ್ಲಿಯೇ ತೃಪ್ತಿ ಕಂಡುಕೊಂಡಲ್ಲಿ ನೆಮ್ಮದಿಯಿಂದ ಜೀವನ ನಡೆಸಬಹುದು’ ಎಂದರು.


ಇದು ಸಂಸ್ಕೃತ ಭಾಷೆಯಲ್ಲಿ ಬರುವ ಒಂದು ಕಥೆಯಾದರೂ, ನೀಡುವ ಸಂದೇಶ ಎಷ್ಟೊಂದು ದೊಡ್ಡದಲ್ಲವೇ? ನಾವು ಎಷ್ಟೋ ಬಾರಿ ಇತರರೊಂದಿಗೆ ಹೋಲಿಸಿಕೊಂಡು ನಮ್ಮ ನೆಮ್ಮದಿ ಹಾಳು ಮಾಡಿಕೊಳ್ಳುತ್ತೇವೆ. ನಮಗೆ ಒದಗಿರುವುದರಲ್ಲೇ ಸಂತೋಷದಿಂದ ಬಾಳಲು ಸಂಕಲ್ಪಿಸಿದರೆ ಕೊರಗು ಕಾಡುವುದಿಲ್ಲ.

No comments:

Post a Comment