Saturday, 27 August 2022

ಹೀಗೆ ಮತ್ತೊಂದು ಆಧ್ಯಾತ್ಮಿಕ ಸತ್ಯಘಟನೆ ಕತೆ..

 

ಕಾಬೂಲ್ ನಗರದಲ್ಲಿ ರಶ್ ಖಾನ್ (ರಸ್ ಖಾನ್) ಹೆಸರಿನ ಒಬ್ಬ ಸಮಗಾರನಿದ್ದ.(ಚಮ್ಮಾರ )ಒಮ್ಮೆ ಜಾತ್ರೆಯಲ್ಲಿ ಭಾರತದ ವ್ಯಾಪಾರಿಗಳು ಹಾಕಿದ್ದ ಮಳಿಗೆಯಲ್ಲಿ ಬೆಣ್ಣೆ ಕದಿಯುತ್ತಿದ್ದ ಪುಟಾಣಿ ಕೃಷ್ಣನ ಚಿತ್ರಪಟ ನೋಡಿದ. ಆ ಮಗುವಿನ ದಿವ್ಯ ಚೆಲುವಿಗೆ ಮನಸೋತ. ಆ ಮಗು ಯಾರು, ಎಲ್ಲಿರುತ್ತದೆ ಎಂದು ವಿಚಾರಿಸಿದಾಗ, ಕೆಲಸದ ಗಡಿಬಿಡಿಯಲ್ಲಿದ್ದ ಅಂಗಡಿಯವ ಭಾರತದ ಮಥುರೆಯಲ್ಲಿ ಅಂದು ಮಾತು ತುಂಡರಿಸಿದ.


ರಶ್ ಖಾನನ ಮನಸ್ಸಿನ ತುಂಬ ಮಗುವಿನ ಚಿತ್ರ ತುಂಬಿಕೊಂಡಿತು. ಬೆಣ್ಣೆ ಕದಿಯುತ್ತಿದ್ದ ಆ ಮಗುವಿನ ಕಾಲಲ್ಲಿ ಚಪ್ಪಲಿ ಇರಲಿಲ್ಲ ಎಂಬುದನ್ನು ಗಮನಿಸಿದ್ದ. ಅವನಿಗೆ ಅದೇ ಒಂದು ಚಿಂತೆಯಾಗಿಬಿಟ್ಟಿತು. ಹೇಗಾದರೂ ಆ ಮಗುವಿಗೆ ಚಪ್ಪಲಿ ತೊಡಿಸಬೇಕಲ್ಲ ಎಂದು ಯೋಚಿಸತೊಡಗಿದ. ಆ ಮಗುವನ್ನು ಮುದ್ದಿಸಿ ಚಪ್ಪಲಿ ತೊಡಿಸುವ ಆಶೆ ಅವನನ್ನು ಆವರಿಸಿಬಿಟ್ಟಿತು.


ಅಂಗಡಿಯಾತನಲ್ಲಿ ಮಗುವಿನ ಚಿತ್ರ ಕೇಳಿ ಪಡೆದ ರಶ್ ಖಾನ್, ಸಾಕಷ್ಟು ಕಷ್ಟ ನಷ್ಟ ಎದುರಿಸಿ ಭಾರತ ತಲುಪಿದ. ಮಥುರೆಯನ್ನೂ ತಲುಪಿದ. ಸಿಕ್ಕವರ ಬಳಿಯೆಲ್ಲ ಚಿತ್ರದ ಮಗುವಿನ ಬಗ್ಗೆ ವಿಚಾರಿಸಿದ.  


ಜನರಿಗೆ ಅವನ ವಿಚಾರಣೆ ವಿಚಿತ್ರವಾಗಿ ತೋರಿತು. ಅವರು ‘ದೇಗುಲದಲ್ಲಿದ್ದಾನೆ’ ಎಂದು ಉತ್ತರಿಸಿ ಸುಮ್ಮನಾದರು.


ರಶ್ ಖಾನ್ ದೇಗುಲಗಳನ್ನೆಲ್ಲ ಎಡತಾಕಿದ. ಎಲ್ಲಿಯೂ ಅವನಿಗೆ ಒಳಬಿಡಲಿಲ್ಲ. ಅನ್ನ, ನೀರು ಸೇವಿಸದೆ ಊರಿಂದೂರಿಗೆ ಅಲೆದ ರಶ್ ಖಾನ್, ಮಗುವಿನ ಪಾದಕ್ಕೆ ಚಪ್ಪಲಿ ತೊಡಿಸುವ ಆಸೆ ನೆರವೇರದೆ ಹೋದುದಕ್ಕೆ ಕಣ್ಣೀರು ಸುರಿಸುತ್ತಾ ಕುಳಿತುಬಿಟ್ಟ. ಅವನ ಹೃದಯದಲ್ಲಿ ಪ್ರೇಮ ಪ್ರವಾಹವಾಗಿ ಹರಿಯುತ್ತಿತ್ತು. ಅಸಹಾಯಕನಾಗಿ, ದೀನನಾಗಿ, ಮಗುವಿನ ಚಿತ್ರವನ್ನೆ ನೋಡುತ್ತ ಕುಳಿತುಬಿಟ್ಟ.


ಇದ್ದಕ್ಕಿದ್ದಂತೆ ಯಾರೋ ಹೆಗಲನ್ನು ಬಳಸಿ ಕೆನ್ನೆ ಸೋಕಿಸಿದಂತೆ ಆಯಿತು. ಅದೊಂದು ದಿವ್ಯ ಮೃದು ಸ್ಪರ್ಶ! ನೋಡಿದರೆ ಚಿತ್ರದ ಮಗು ಜೀವತಾಳಿ ನಿಂತಿದೆ!!


ರಶ್ ಖಾನನ ಆನಂದಕ್ಕೆ ಪಾರವೇ ಇಲ್ಲ. ಮಗುವನ್ನೆತ್ತಿ ಕುಣಿದಾಡಿಬಿಟ್ಟ. ಮಗು, “ನನ್ನ ಚಪ್ಪಲಿ ಎಲ್ಲಿ?” ಎಂದು ತೊದಲ್ನುಡಿಯಲ್ಲಿ ಕೇಳಿತು. ಕಣ್ಣೀರು ಒರೆಸಿಕೊಳ್ತಾ ರಶ್ ಖಾನ್ ಜೋಳಿಗೆಯಿಂದ ಪುಟ್ಟದೊಂದು ಜೊತೆ ಚಪ್ಪಲಿ ಹೊರತೆಗೆದ. ಕೃಷ್ಣ ಪಾದಗಳಿಗೆ ಹಿಡಿದ. ಅದರ ಅಳತೆ ಹೇಳಿಮಾಡಿಸಿದ ಹಾಗಿತ್ತು. ಅದನ್ನು ತೊಟ್ಟ ಮಗು ಕುಣಿಯುತ್ತಾ, ನಗುತ್ತಾ ಅದೃಶ್ಯವಾಗಿಹೋಯಿತು.


ತಾನು ಕನಸು ಕಂಡೆನಿರಬೇಕು ಅಂದುಕೊಂಡ ರಶ್ ಖಾನ್ ಜೋಳಿಗೆ ತೆರೆದು ನೋಡಿದ. ಅಲ್ಲಿ ಚಪ್ಪಲಿಗಳಿರಲಿಲ್ಲ. ಚಿತ್ರದ ಮಗು ಬಂದುಹೋಗಿದ್ದು ಖಾತ್ರಿಯಾಯಿತು. ಅವನ ಹೃದಯದಲ್ಲಿ ಅದರ ಸ್ಪರ್ಶದ ಬಿಸುಪು ನಿಚ್ಚಳವಾಗಿತ್ತು. ರಶ್ ಖಾನ್ ಅದರ ಅನುಭೂತಿಯಲ್ಲೆ ದಿನಗಟ್ಟಲೆ ಕಳೆದ.


ಮುಂದೆ ಅವನಿಗೆ ಆ ಮಗುವಿನ ಬಗ್ಗೆ ತಿಳಿಯಿತು. ಅನಂತರ ಅವನು ಕೃಷ್ಣಪ್ರೇಮಿಯಾಗಿ ತನ್ನ ಬದುಕನ್ನು ಸಾಧನೆಯಲ್ಲಿ ಕಳೆದ. ಬ್ರಜಭೂಮಿಯಲ್ಲೆ ನೆಲೆಸಿ, ಬ್ರಜ ಬಾಷೆಯಲ್ಲಿ ಸುಂದರವಾದ ಅನೇಕ ದ್ವಿಪದಿಗಳನ್ನು ರಚಿಸಿದ.


ರಶ್ ಖಾನನ ಈ ದ್ವಿಪದಿಗಳು ಬ್ರಜವಾಸಿಗಳ ಬಾಯಲ್ಲಿ ಇಂದಿಗೂ ನಲಿಯುತ್ತವೆ. ಹೀಗೆ ರಶ್ ಖಾನ್, ಕಾಲವಾದ ನಂತರವೂ ಕೃಷ್ಣಪ್ರೇಮದಲ್ಲಿ ಅಮರವಾಗಿದ್ದಾನೆ. ಭಗವಂತ ಯಾರನ್ನು ಯಾವಾಗ ಯಾವ ರೀತಿ ಆಶ್ರಯಿಸುತ್ತಾನೆ. ಭಗವಂತನೇ ಬಲ್ಲಾ,,,🌺💐✍️🙏. ಶ್ರೀ ವೇದಮಾತಾ ಗುರುಕುಲ.ಈತರ ಭಗವಂತನ ಪವಾಡದ ಕಥೆಗಳನ್ನು ಓದಿದರೆ ಕೇಳಿದರೆ ನನಗೆ ಒಂತರ ಆಗುತ್ತೆ. ನನ್ನ ಕಣ್ಣಾಲಿಗಳು ತುಂಬಿ ಬರುತ್ತದೆ. ಯಾರೂ ದೇವರನ್ನು ಗಂಭೀರವಾಗಿ ತೆಗೆದು ಕೊಳ್ಳುವವರೋ ಈ ರೀತಿ ಅನುಭವ ಯಾರಿಗೆ  ಆಗುತ್ತೋ ಅವರು ಎಂದಿಗೂ ಸುಳ್ಳು ಹೇಳಲು ಮೋಸ ಮಾಡಲು ಹೆದರುವವರು. ಭಗವಂತ ನಮ್ಮ ಎಲ್ಲಾ ಚಲನ ವಲನ ಗಮನಿಸುತ್ತಾನೆ ಎಂದು ಭಾವಿಸಿ ಆದಷ್ಟು ಸತ್ಯ ಧರ್ಮ ಪ್ರಾಮಾಣಿಕತೆಯಿಂದ ಬದುಕುವರು ಆಗಿರುತ್ತಾರೆ 🌺💐🙏

No comments:

Post a Comment