Saturday, 27 August 2022

ಸ್ಪರ್ಶಮಣಿ


ಒಂದು ಸಲ ಗೌತಮ ಬುದ್ದನು ಒಂದು ರಾತ್ರಿ ಒಬ್ಬ ಬಡ ಮೀನುಗಾರನ ಮನೆಯಲ್ಲಿ ಆಶ್ರಯ ಪಡೆದು ಅವನ ಆತಿಥ್ಯ ಸ್ವೀಕರಿಸಿದನು. ಬೆಳಗ್ಗೆ ಎದ್ದು ಹೊರಡುವಾಗ ಮೀನುಗಾರನಿಗೆ ಬುದ್ಧನು ನಮಸ್ಕರಿಸಿ, ನಿಮ್ಮ ಆತಿಥ್ಯಕ್ಕೆ ನನ್ನ ಧನ್ಯವಾದಗಳು ನಾನು ನಿನಗೆ ಏನಾದರೂ ಕೊಡುತ್ತೇನೆ ಕೇಳು ಎಂದನು. ಬಡ ಮೀನುಗಾರನು ಮಹಾಸ್ವಾಮಿ ತಾವು ಮಹಾಪುರುಷರು ನಾನು ಬಹಳ ಬಡವ ನನಗೆ ತುಂಬಾ ಬಂಗಾರ ಬೇಕು ಎಂದು ಕೇಳಿದನು. ಬುದ್ಧನು ನಸುನಕ್ಕು, ನಾನು ನಿನಗೆ ನೇರವಾಗಿ ಬಂಗಾರವನ್ನು ಕೈಗೆ ಕೊಡಲಾರೆ ಅದನ್ನು ಪಡೆಯಲು ನೀನು ಸ್ವಲ್ಪ ಶ್ರಮಪಡಬೇಕಾಗುತ್ತದೆ, ಸಮುದ್ರದ ದಂಡೆಗೆ ಹೋಗಿ ಅಲ್ಲಿ ಸಾವಿರಾರು ಕಪ್ಪೆಚಿಪ್ಪುಗಳು ಬಿದ್ದಿರುತ್ತವೆ. ಅವುಗಳಲ್ಲಿ ಒಂದು ಕಪ್ಪೆ ಚಿಪ್ಪು 'ಸ್ಪರ್ಶಮಣಿ' ಆಗಿರುತ್ತದೆ. ಒಂದೊಂದೇ ಕಪ್ಪೆಚಿಪ್ಪನ್ನು ತೆಗೆದು ಕಬ್ಬಿಣದ ಯಾವುದಾದರೂ ವಸ್ತುವಿಗೆ 'ಸ್ಪರ್ಶ' ಮಾಡಿದರೆ ಆ ವಸ್ತು ಕಬ್ಬಿನ ಹೋಗಿ 'ಬಂಗಾರ' ಆಗುತ್ತದೆ. ನೀನು ಸಮುದ್ರ ದಂಡೆಗೆ ಹೋಗಿ ಹುಡುಕಿ ನಿನಗೆ ಎಷ್ಟು ಬೇಕೋ ಅಷ್ಟು ಬಂಗಾರವನ್ನು ಮಾಡಿಕೋ ಎಂದು ಹೇಳಿ ಬುದ್ಧನು ಮುಂದೆ ಪ್ರಯಾಣ ಬೆಳೆಸಿದನು. 


ಇತ್ತ ಮೀನುಗಾರನು ಸಮುದ್ರದ ದಂಡೆಗೆ ಓಡಿ ಬಂದನು. ಕೈಯಲ್ಲಿ ಒಂದು ಕಬ್ಬಿಣದ ಮೊಳೆ ಹಿಡಿದುಕೊಂಡು ಬಂದಿದ್ದನು. ಸಮುದ್ರದ ದಂಡೆ ತುಂಬಾ ಓಡಾಡುತ್ತಾ ಸಾಕಷ್ಟು ಕಪ್ಪೆಚಿಪ್ಪುಗಳನ್ನು ಸಂಗ್ರಹಿಸಿದ. ಹೆಚ್ಚು ಜನಗಳ ಸಂಚಾರವಿರದ ಆಳವಿರುವ ಸಮುದ್ರದ ‌ ಹತ್ತಿರ ಬಂದನು. ಸರಿಯಾದ ಜಾಗ ಆರಿಸಿ ಕುಳಿತುಕೊಂಡನು. ತಾನು ಸಮುದ್ರದ ದಂಡೆಗುಂಟ ಓಡಾಡಿ ಆರಿಸಿ ಸಂಗ್ರಹಿಸಿ ತಂದಿದ್ದ ಒಂದೊಂದೇ ಕಪ್ಪೆಚಿಪ್ಪನ್ನು ಬಲಗೈಯಲ್ಲಿ ತೆಗೆದುಕೊಂಡು ಎಡಗೈ ಯ್ಯಲ್ಲಿರುವ ಕಬ್ಬಿಣದ ಮೊಳೆಗೆ ತಗಲಿಸುತ್ತಿದ್ದನು.ಕಬ್ಬಿಣದ ಮೊಳೆ ಬಂಗಾರವಾಯಿತಾ ಎಂದು ನೋಡುವುದು ಆಗದಿದ್ದರೆ ಅದು ಸಾಮಾನ್ಯ ಕಪ್ಪೆಚಿಪ್ಪು ಎಂದು ತಿಳಿದು ಅದನ್ನು ಸಮುದ್ರಕ್ಕೆ ಎಸೆಯುವುದು. ಹೀಗೆ ಬಹಳ ಹೊತ್ತಿನ ತನಕ ಮಾಡುತ್ತಲೇ ಹೋದ. ಆಮೇಲಾಮೇಲೆ ಅದು ಅವನಿಗೆ ಒಂದು ತರಹ ಯಾಂತ್ರಿಕ ಎನ್ನುವಂತಾಯಿತು. ಕಪ್ಪೆಚಿಪ್ಪು ತೆಗೆದುಕೊಳ್ಳುವುದು ಮೊಳೆಗೆ ತಗಲಿಸುವುದು ಸಮುದ್ರಕ್ಕೆ ಹಾಕುವುದು. ಹೀಗೆ ಬಹಳ ಸಮಯ ಕಳೆಯಿತು. ಅವನಿಗೆ ತುಂಬಾ ಬಾಯಾರಿಕೆ ಮತ್ತು ಹಸಿವು ಆಗಿತ್ತು ಆದರೂ ಸಹ ಆಸೆಯಿಂದ ಈ ಕೆಲಸವನ್ನು ಮುಂದುವರಿಸುತ್ತಲೇ ಇದ್ದ. ರಾತ್ರಿ ಕಳೆದು ಬೆಳಗಾಯಿತು. ಅವನಿಗೆ ಗಾಬರಿಯಾಯಿತು. ಯಾಕೆಂದರೆ ಅವನ ಎಡ ಕೈಯಲ್ಲಿದ್ದ ಕಬ್ಬಿಣದ ಮೊಳೆ ಯಾವಾಗಲೋ ಬಂಗಾರದ ಮೊಳೆ ಆಗಿಹೋಗಿತ್ತು. ಆದರೆ ಅದು ಯಾವ ಕಪ್ಪೆಚಿಪ್ಪು ಮುಟ್ಟಿ ಆಗಿತ್ತೋ ಗೊತ್ತಿಲ್ಲ.

ಆ ಕಪ್ಪೆಚಿಪ್ಪನ್ನೂ ಆತ ಸಮುದ್ರಕ್ಕೆ ಬಿಸಾಕಿದ್ದ. ಅಷ್ಟೊತ್ತಿಗಾಗಲೇ ಆತ ಸಮುದ್ರಕ್ಕೆ ಬಿಸಾಡಿದ ಸಾವಿರಾರು ಚಿಪ್ಪುಗಳಲ್ಲಿ ಬಂಗಾರ ಮಾಡುವ ಸ್ಪರ್ಶಮಣಿ ಚಿಪ್ಪು ಕೂಡ ಆಳವಾದ ಸಮುದ್ರದ ನೀರಿನಲ್ಲಿ ಸೇರಿಹೋಗಿತ್ತು.

ನಿರಾಸೆಯಿಂದ ಮೀನುಗಾರನು ಭಗವಾನ್ ಬುದ್ಧನನ್ನು ಬೈದುಕೊಳ್ಳುತ್ತ ತನ್ನ ಹಣೆಬರಹವನ್ನು ಹಳಿಯುತ್ತಾ ಮನೆಗೆ ಹಿಂದಿರುಗಿದನು. ಅವನು ಮುಂದೆ ಬಡತನದ ಜೀವನವನ್ನೇ ಮುಂದುವರೆಸಿದನು. 


ನಮಗೂ ಸಹ ಮೀನುಗಾರನಿಗಾದ ಅನುಭವ ಆಗಿರುತ್ತದೆ. ಒಮ್ಮೊಮ್ಮೆ ಎಂತಹ ಸುವರ್ಣ ಅವಕಾಶಗಳು ಬಂದರೂ, ಅದಕ್ಕಿಂತ ಒಳ್ಳೆಯದು ಬರುತ್ತದೋ ಏನೋ, ಇನ್ನು ಅವಕಾಶಗಳಿಗಾಗಿ ಕಾಯುತ್ತಲೇ ಬದುಕನ್ನು ವ್ಯರ್ಥ ಮಾಡಿಕೊಂಡವರು ಇದ್ದಾರೆ. ಹೆಣ್ಣು ಹೆತ್ತವರು ಇಂಜಿನಿಯರ್, ಡಾಕ್ಟರು ಓದಿದ ಗಂಡು ಆಗಬೇಕೆಂದು, ಅತ್ತೆ ಮಾವಂದಿರ ಜೊತೆ ಇರಬಾರದೆಂದು, ಇಂತಹ ಬೇಕು ಗಳಿಂದಾಗಿ ಮದುವೆಗಳನ್ನು ಮುಂದೂಡಿ 

ಮದುವೆಯಾಗದೆ ಉಳಿದ ಹೆಣ್ಣು ಮಕ್ಕಳು, ಹಾಗೆ ಗಂಡುಮಕ್ಕಳಿಗೆ, ಕೆಲಸದಲ್ಲಿರುವ ಸೊಸೆಯೇ ಬೇಕೆಂದೋ, ಶ್ರೀಮಂತರ ಮನೆ ಹುಡುಗಿ ಆಗಿರಬೇಕೆಂದೋ, ಬಯಸಿ ಹುಡುಗನಿಗೆ ಕೂದಲೆಲ್ಲಾ ಉದುರಿ ವಯಸ್ಸಾದಂತೆ ಆದಮೇಲೆ ಮದುವೆಯಾಗದೆ ಹಾಗೇ ಉಳಿದ ಗಂಡು ಮಕ್ಕಳು ಇದ್ದಾರೆ. ಬಂದ ಅವಕಾಶಗಳನ್ನು ಮುಂದೂಡುತ್ತಾ ಹೋದರೆ ಕೈತಪ್ಪುವುದೇ ಜಾಸ್ತಿಯಾಗುತ್ತದೆ. ಆಸೆ ಪಡುವುದು ತಪ್ಪಲ್ಲ ಅದಕ್ಕಾಗಿ ಜೀವಮಾನವನ್ನು ಕಳೆಯುವುದು ದುರದೃಷ್ಟ.

ಸಿಗುವ ಸಂದರ್ಭವನ್ನೆ ' ಸ್ಪರ್ಶಮಣಿ' ಎಂದೇ ತಿಳಿದುಕೊಂಡು ಶ್ರದ್ಧೆಯಿಂದ 

ಆಗಬೇಕಾದ ಕೆಲಸಗಳನ್ನು ಮಾಡಬೇಕಾದ ಸಮಯದಲ್ಲಿ ಮುಗಿಸುತ್ತಾ ಬಂದರೆ, ಮಾಡುವ ಕೆಲಸವೆಲ್ಲಾ ಬಂಗಾರವೇ ಆಗುತ್ತದೆ. 


(ಇದು ನನ್ನ ಅನಿಸಿಕೆ ಮಾತ್ರ.) 


"ಮಧು ಸಿಕ್ತೋ ನಿಂಬಖಹ,ಹ

ದುಗ್ದ ಪುಷ್ಟೋ ಭುಜಂಗಮಹ 

ಗಂಗಾ ಸ್ನಾತೋಪಿ ದುರ್ಜನ,  

ಸ್ವಭಾವಂ ನೈವ ಮುಂಚತಿ". 


ಬೇವಿನ ಕಾಂಡಕ್ಕೆ ಜೇನುತುಪ್ಪವನ್ನು ಹಚ್ಚಿದರೂ,ಹಾವಿಗೆ ಹಾಲನ್ನು ಎರೆದರೂ, ದುರ್ಜನರು ಗಂಗೆಯಲ್ಲಿ ಸ್ನಾನ ಮಾಡಿದರೂ,ಯಾರ ಸ್ವಭಾವವು ಕೂಡ ಬದಲಾಗದು. 


Courtesy: WhatsApp message 

No comments:

Post a Comment