Wednesday 24 August 2022

ಅಪ್ಪನ ಶಕ್ತಿ ಕಡಿಮೆಯಾಗಿದೆ

 *ಅಪ್ಪನ ಶಕ್ತಿ ಕಡಿಮೆಯಾಗಿದೆ😥*

ಕಣ್ಣು ತೆರೆಸುವ ಕಥೆ

ಹಾಗೇ ಸುಮ್ಮನೆ 

ಈ ಕೆಳಗಿನ ಪುಟ್ಟ ಕಥೆಯನ್ನು ಓದಿ,

ಐದಾರು ತಲೆಮಾರುಗಳ ಕುಟುಂಬದ ಕುಡಿಗಳೆಲ್ಲ ಕೂಡಿ ಇರುವ ಆ ಅವಿಭಕ್ತ ಕುಟುಂಬದ ಹಿರಿಯನಿಗೆ 93 ವರ್ಷ.

ಅದೊಂದು ದಿನ ಯಾವುದೋ ಕೌಟುಂಬಿಕ ವಿಷಯದಲ್ಲಿ ಮಾತು ಬೆಳೆದು, ಆ ಹಿರಿಯ ತನ್ನ 69 ವಯಸ್ಸಿನ ಮಗನನ್ನು ಆತನ ಮಕ್ಕಳು, ಮೊಮ್ಮಕ್ಕಳೆದುರೇ ಹೊಡೆದು ಬಿಡುತ್ತಾನೆ. ಆಗ ಮತ್ಯಾರು ಮಾತನಾಡಲು ಅಲ್ಲಿ ಏನೂ ಉಳಿದಿರುವುದಿಲ್ಲ. ಆವರೆಗೆ ಕಂಬಗಳ ಮರೆಯಲ್ಲಿ, ಬಾಗಿಲು ಕಿಟಿಕಿಯ ಹಿಂದೆ ನಿಂತು ನಡೆಯುವುದನ್ನು ಕದ್ದು ನೋಡುತ್ತಿದ್ದ ಹೆಂಗಸರು, ಚಿಕ್ಕವರೆಲ್ಲಾ ಒಳಗೆ ಸರಿದು ಬಿಡುತ್ತಾರೆ.

ಆ ರಾತ್ರಿ ತುಂಬಿದ ಇಡೀ ಮನೆಯಲ್ಲಿ ಮೌನ ಆವರಿಸಿದೆ. ಆ ಎರಡು ರೂಮಿನಲ್ಲಿರುವವರನ್ನು ಬಿಟ್ಟು.

ಹಿರಿಯನಿಗೆ ನಿದ್ದೆ ಬರುತ್ತಿಲ್ಲ. ಈ ಕಡೆಯಿಂದ ಆ ಕಡೆಗೆ, ಆ ಕಡೆಯಿಂದ ಈ ಕಡೆಗೆ ಆಗಾಗ ಮಗ್ಗಲು ಬದಲಿಸುತ್ತಿರುತ್ತಾನೆ. ಪಕ್ಕದಲ್ಲಿರುವ ಅಜ್ಜಿಗೆ ಯಜಮಾನ ಯಾವುದೋ ಚಿಂತೆಯಲ್ಲಿದ್ದಾನೆಂದು ಅನುಭವದಿಂದ ಗೊತ್ತಾಗುತ್ತಿದೆ, ಆದರೆ ಕೇಳಲು ಭಯ. ಕೊನೆಗೆ..

"ಯಾಕ್ರಿ? ನಿದ್ದಿ ಬರ್ತಿಲ್ಲೇನು? ನೀರೇನಾದ್ರೂ ಕೊಡ್ಲಾ?" ಕೇಳುತ್ತಾಳೆ..

"ಬ್ಯಾಡ" ಎಂದಷ್ಟೇ ಹೇಳಿ, ಸ್ವಲ್ಪ ಸಮಯದ ನಂತರ 

"ಆವಾಗ ನಿನ್ನ ಮಗನ ಮುಖ ನೋಡ್ದೇನು?" ಎನ್ನುತ್ತಾನೆ.

"ಹುಂ.." ಎಂದಷ್ಟೇ ಹೇಳುತ್ತಾಳೆ ಅಜ್ಜಿ..

"ಮೊದಲೆಲ್ಲಾ ಹೊಡದಾಗ ಅವ್ನ ಕಣ್ಣಾಗ ನೀರು ಬರ್ತಿರ್ಲಿಲ್ಲ, ಇವತ್ತು ಕಣ್ತುಂಬ ನೀರು ತುಂಬಿಕೊಂಡಿದ್ದ" ಅಂದ ಹಿರಿಯ, ಅದನ್ನಾಕೆಯೂ ಗಮನಿಸಿದ್ಲು..

"ನಾ ಜೋರಾಗಿ ಹೊಡ್ದನೇನೋ?, ಪೆಟ್ಟು ಜೋರಾಗಿ ಬಿತ್ತೇನೋ?" ಎಂದು ನೊಂದು ಕೊಂಡಿದ್ದ..

ಇನ್ನೊಂದು ರೂಮಿನಲ್ಲಿದ್ದ ಮಗನಿಗೂ ನಿದ್ದೆ ಬರುತ್ತಿಲ್ಲ. ಆತನಿಗೆ ನಿದ್ದೆ ಬರದೇ ಆತನ ಹೆಂಡತಿಗೂ ನಿದ್ದೆಯಿರಲಿಲ್ಲ. 

"ಮೊದ್ಲ್ಯಾವಾಗ್ಲೂ ಇಷ್ಟು ಮನಸಿಗೆ ಹಚ್ಗೊಳ್ಲಾರ್ದೊರು ಇವತ್ಯಾಕ ಬಾಳ ಬ್ಯಾಸರ ಮಾಡ್ಕೊಂಡೇರಿ?" ಎಂದು ಹೇಳುತ್ತಾ... "ದೊಡ್ಡೋರು ಮೊದ್ಲು ಎಷ್ಟು ಸಲ ಹೊಡದ್ರೂ ನಿಮ್ ಕಣ್ಣಾಗ ನೀರ ಬಂದಿದ್ದಿಲ್ಲ?" ಕಳಕಳಿಯಿಂದ ಕೇಳಿದಳು..

"ಅಪ್ಪ, ಹಿಂದಿನ ಸಲ ಹೊಡ್ದಾಗ ಪೆಟ್ಟು ಜೋರಾಗಿತ್ತು. ಈ ಸಲ ಹೊಡ್ದಂಗೆ ಅನ್ಸಲಿಲ್ಲ, ನಮ್ಮಪ್ಪನ ಕೈಯಾಗ ಶಕ್ತಿ ಕಡಿಮಿ ಆಗೇದ" ನೋವಿನಿಂದ ಹೇಳಿದಾತ.

"ಅಪ್ಪನ್ನ ಕಳ್ಕೊಂಡ್ರ ನಾವು ಪರದೇಶಿ ಆದಂಗಾಗ್ತೇವಿ, ಇನ್ಮ್ಯಾಲೆ ಅಪ್ಪನ್ನ ಇನ್ನೂ ಕಾಳಜಿಲಿಂದ ನೋಡ್ಕೋಬೇಕು" ಅಂದ..

- - - - - - - - - - - - - - - - - - - - - -

ಇಂಥಾ ಪವಿತ್ರ ಸಂಬಂಧಗಳು ಈಗ ಎಷ್ಟು ಹುಡುಕಿದರೂ ಸಿಗುವುದಿಲ್ಲ. ಕಳೆದುಕೊಂಡ ಮೇಲೆಯೇ ನಿಜವಾದ ಮೌಲ್ಯ ಗೊತ್ತಾಗೋದು, ಅಲ್ಲವೇ?

ಒಂದಿಷ್ಟು ಸಹನೆ, ಒಂಚೂರು ತ್ಯಾಗ ಬುದ್ಧಿ, ಸ್ವಲ್ಪ ಹೆಚ್ಚು ಪ್ರೀತಿ, .... ಎಂಥಾ ಪವಾಡ ಸೃಷ್ಟಿಸಬಲ್ಲವು, ಯೋಚಿಸಿ ನೋಡಿ. ಹೌದು, ನಾವು ಬದಲಾಗೋಣ.


Courtsey: Whatsapp

No comments:

Post a Comment