Saturday, 27 August 2022

ಸಂತ ಕಬೀರದಾಸ


ಕಬೀರದಾಸರು ಉತ್ತರ ಭಾರತದ ಶ್ರೇಷ್ಠ ಸಂತ ಕವಿಯಾಗಿದ್ದರು. ಅವರು ಮಾನವ ಪ್ರೇಮಿಗಳು, ದಯಾಳು ಆಗಿದ್ದರು. ಕಬೀರದಾಸರು  ವೃತ್ತಿಯಿಂದ ನೇಕಾರರಾಗಿದ್ದು  ಸ್ವತಹ ಚಾದರ ನೇಯುತ್ತಿದ್ದರು.  ಪೇಟೆಗೆ ತಯಾರಿಸಿದ ಚಾದರಗಳನ್ನು ಒಯ್ದು ಮಾರಾಟ ಮಾಡಿ ಬಂದ ಹಣದಿಂದ ಜೀವನ ಸಾಗಿಸುತ್ತಿದ್ದರು.  ಕಬೀರರು ಬದುಕಿದ್ದಾಗಲೇ ದಂತಕಥೆಯಾಗಿದ್ದರು.ಅವರ ಜೀವನದಲ್ಲಿ ಒಂದು ಘಟನೆ. 


ಕಬೀರರನ್ನು ಎಲ್ಲರೂ ಬಹಳ ಪ್ರೀತಿ, ಗೌರವದಿಂದ  ಕಾಣುತ್ತಿದ್ದರು. ಎಲ್ಲರಿಗೂ  ಇಷ್ಟವಾದರೂ,  ಕೆಲವು ಜನರಿಗೆ ಅವರ ಮೇಲೆ ಅಸೂಯೆ ಇತ್ತು.  ಈ ನೇಕಾರನಿಗೆ ಯಾಕಿಷ್ಟು ಜನ ಮರ್ಯಾದೆ ಕೊಡುತ್ತಾರೆಂದು ಸಂಕಟಪಡುತ್ತಿದ್ದರು. ಏನಾದರೂ ಮಾಡಿ ಕಬೀರರ ಹೆಸರನ್ನು ಕೆಡಿಸಬೇಕು ಎಂದು ಕೆಲವು ಜನರು ಒಂದು ಉಪಾಯ ಮಾಡಿದರು.

ಕಬೀರರು ತಮ್ಮ ಮನೆಯಲ್ಲಿ ನೇಯ್ದ ಚಾದರ ಗಳನ್ನು ತೆಗೆದುಕೊಂಡು ಪೇಟೆಗೆ ಹೋಗಿ ಅದನ್ನು ಮಾರಿ ಮತ್ತೆ ಬೇಕಾದ ಹೊಸ ದಾರಗಳನ್ನು ತರಬೇಕು. ಕಬೀರರನ್ನು ಕಂಡರೆ ಆಗದೆ ಇದ್ದ ಜನ ಈ ಅವಕಾಶವನ್ನು ಬಳಸಿಕೊಂಡು, ಒಬ್ಬ ವೇಶ್ಯ  ಸ್ತ್ರೀಗೆ , ನೀನು ಒಂದು ನಾಟಕ ಮಾಡಬೇಕು. ಅದಕ್ಕೆ ಹಣ ಕೊಡುತ್ತೇವೆ. ಕಬೀರರು ಚಾದರ ಮಾರಲು ಪೇಟೆಗೆ ಬಂದಿರುವಾಗ ಅವರ ಕೈಯನ್ನು ಹಿಡಿದುಕೊಂಡು ಜನಗಳಿಗೆ ಇವನು ನನ್ನ ಗಂಡ ನನ್ನನ್ನು ಬಿಟ್ಟು ಬಂದಿದ್ದಾನೆ ಎಂದು ಅಳಬೇಕು, ಅವನು ಬಹಳ ಮರ್ಯಾದಸ್ಥ ಎಂದು  ಜನರು ತಿಳಿದುಕೊಂಡಿದ್ದಾರೆ, ಅವನು  ನಿನ್ನನ್ನು ಎಲ್ಲಿ ಮದುವೆಯಾಗಿದ್ದೇನೆ ನನಗೆ ಮದುವೆಯಾದ ಹೆಂಡತಿ ಮನೆಯಲ್ಲಿದ್ದಾಳೆ. ಎಂದು ಹೇಳಿದರೂ ಕೇಳದೆ ನೀನು ಜನಗಳ ಎದುರಿಗೆ ರಂಪಾಟ ಮಾಡಬೇಕು. ಆ ಸಮಯಕ್ಕೆ ನಾವೆಲ್ಲರೂ ಬಂದು ನಿನ್ನ ಪರವಾಗಿ ನಿಲ್ಲುತ್ತೇವೆ. ಅವನ  ಮರ್ಯಾದೆ ಕಳೆಯುವಂತೆ  ನಾಟಕ ಮಾಡಬೇಕು  ಎಂದು ಹಣಕೊಟ್ಟರು. ಆಕೆ ಹಣ ತೆಗೆದುಕೊಂಡು ಅವರು ಹೇಳಿದಂತೆ ಮಾಡಲು ಒಪ್ಪಿಕೊಂಡಳು. ಕಬೀರರು ಹೋಗುವ ಮಾರ್ಕೆಟಿನ ಜಾಗ ತೋರಿಸಿ ಹೋದರು. 


ಎಂದಿನಂತೆ ಕಬೀರರು ಚಾದರ ಗಳನ್ನು ತೆಗೆದುಕೊಂಡು ಬಂದರು. ಮಾರ್ಕೆಟಿಗೆ  ಬರುವುದನ್ನೇ ಕಾಯುತ್ತಿದ್ದು, ಮಾರ್ಕೆಟಿನ ನಡು ರಸ್ತೆಗೆ ಬಂದಾಗ ಈ ಹೆಂಗಸು ಓಡಿಹೋಗಿ ಕಬೀರರ ಕೈಹಿಡಿದುಕೊಂಡು ಜೋರಾಗಿ ಅಳುತ್ತಾ "ನೀವು ಯಾಕೆ ಹೀಗೆ ಮಾಡಿದಿರಿ ನನ್ನನ್ನು ಮದುವೆಯಾಗಿ ನಡು ನೀರಲ್ಲಿ ಕೈಬಿಟ್ಟು ಬಂದಿದ್ದೀರಿ, ಎರಡು ವರ್ಷಗಳಿಂದ ನಿಮ್ಮನ್ನು ಹುಡುಕಾಡುತ್ತಿದ್ದೇನೆ. ನಾನು ಎಷ್ಟು ಕಷ್ಟಪಟ್ಟಿದ್ದೇನೆ. ನನಗೆ ಯಾರು ದಿಕ್ಕು" ಎಂದು ಜೋರಾಗಿ ಜನಗಳಿಗೆ ಕೇಳುವಂತೆ ಅಳುತ್ತಿದ್ದಳು. ಇದನ್ನೆಲ್ಲಾ ನೋಡಿ ನೂರಾರು ಜನ ಸೇರಿ ಬಿಟ್ಟರು. ಇದೇನು ಕಬೀರರು ಸಂತರು ಸಾತ್ವಿಕರು ಎಂದುಕೊಂಡಿದ್ದೆವು ಇವರು ಈ ತರಹ ಕೆಲಸ ಮಾಡಿದ್ದಾರಾ? ಎಂಬಂತೆ ಕೌತುಕದಿಂದ ನೋಡುತ್ತಿದ್ದರು. ಕಬೀರರು ಸುತ್ತಲೂ ನೋಡಿದರು. ಕ್ಷಣಮಾತ್ರದಲ್ಲಿ ಎಲ್ಲವೂ ಅರ್ಥವಾಯಿತು. ಆಕೆ ಕಬೀರರ ಕಾಲನ್ನು ಗಟ್ಟಿಯಾಗಿ ಹಿಡಿದು ಕೊಂಡು ಅಳುತ್ತಿದ್ದಳು. ಯೋಚಿಸಿದ ಕಬೀರರು ಹೆಣ್ಣಿನ ಕೈಹಿಡಿದು "ಏಳಮ್ಮ ನಡಿ ಮನೆಗೆ ಹೋಗೋಣ ರಸ್ತೆ ಮಧ್ಯ ಹೀಗೆಲ್ಲಾ ಅಳಬಾರದು" ಎಂದರು. ಆ ಹೆಂಗಸಿಗೆ ಈಗ ನಿಜಕ್ಕೂ ಹೆದರಿಕೆ ಆಯಿತು. ಅವಳು ಕಬೀರರ ಮನೆಗೆ ಹೋಗಲು ಬಂದವಳಲ್ಲ ಹಣಕ್ಕೆ ಬಂದವಳು. ಅಲ್ಲದೆ ಹಣ ಕೊಟ್ಟವರು ಮಾರ್ಕೆಟಿನಲ್ಲಿ ಮಾತ್ರ ಹೀಗೆ ಮಾಡಲು ಹೇಳಿದ್ದರು ಅದು ಒಂದಷ್ಟು ಸಮಯ ಮಾತ್ರ. ಅವಳಿಗೆ ನಿಜಕ್ಕೂ ದಿಗಿಲಾಗಿ ಬಿಟ್ಟಿತು. ಅಷ್ಟು ಹೊತ್ತಿಗೆ ಅಲ್ಲಿ ಇದ್ದ ಜನರೆಲ್ಲರೂ ರಾಜನ ಹತ್ತಿರ ಹೋಗಿ ಕಬೀರರು ಯಾವುದೋ  ಮಹಿಳೆಯನ್ನು ಮದುವೆಯಾಗಿ  ಮೋಸ ಮಾಡಿದ್ದಾನೆ. ಈಗ ಆಕೆಯ ಕೈ ಹಿಡಿದು ತನ್ನ ಮನೆಗೆ ಕರೆದುಕೊಂಡು ಹೋಗುತ್ತಿದ್ದಾನೆ ಎಂದು ಚಾಡಿ ಹೇಳಿದರು. ರಾಜನಿಗೂ ಬಹಳ ಆಶ್ಚರ್ಯವಾಯಿತು ಕಬೀರರು ಎಂತಹ ಸಂತರು ಮಹಾನುಭಾವರು ಇವರು ಇಂಥ ಕೆಲಸ ಮಾಡುತ್ತಾರೆ ಅವರನ್ನು ಕರೆದುಕೊಂಡು ಬನ್ನಿ ಎಂದನು. 


ರಾಜ ಭಟರು ಅವನನ್ನು ಕರೆದುಕೊಂಡು ಹೋಗಲು ಬಂದಾಗ, ಕಬೀರರು ನಡಿ ಆಸ್ಥಾನಕ್ಕೆ ಹೋಗೋಣ ಎಂದು ಆಕೆಯ ಕೈಹಿಡಿದುಕೊಂಡು ಅರಮನೆಗೆ ಹೊರಟರು. ಆಕೆಯು ಇಲ್ಲ ನನ್ನ ಕೈ ಬಿಡಿ ನಾನು ಬರುವುದಿಲ್ಲ. ರಾಜರ ಎದುರಿಗೆಲ್ಲ ನಾನು ಬರುವವಳಲ್ಲ ಎಂದಳು. ಆದರೆ ಕಬೀರರು ಅದು ಹೇಗೆ ಆಗುತ್ತೆ ನೀನು ನನ್ನ ಮದುವೆಯಾಗಿರುವೆ ಹೆದರಿಕೆ ಯಾಕೆ ಹೋಗೋಣ ಎಂದು ಅವಳನ್ನು ಕೈಹಿಡಿದುಕೊಂಡು ಆಸ್ತಾನಕ್ಕೆ ಬಂದರು. ಇದನ್ನು ಕಂಡು ರಾಜನಿಗೆ ಬಹಳ ಆಶ್ಚರ್ಯವಾಯಿತು. ಇದೇನು ಕಬೀರ ನಿಮ್ಮನ್ನು ದೊಡ್ಡ ಸಂತರು ಎಂದುಕೊಂಡಿದ್ದೆವು ನೀವು ಹೇಗೆ ಮಾಡುವುದು ಎಷ್ಟು ಸರಿ ಎಂದು ರಾಜನು ಕೇಳಿದನು.

ಅಷ್ಟು ಹೊತ್ತಿಗೆ ಆಗಲೇ ಆ ಹೆಂಗಸು  ಹೆದರಿ ನಡುಗಿ  ಹೋಗಿದ್ದಳು. ಇನ್ನೂ ರಾಜನ ಆಸ್ಥಾನದಲ್ಲಿ ವಿಚಾರಣೆ ಆದರೆ ತನ್ನ ಗುಟ್ಟನ್ನು ಬಯಲಾಗುತ್ತದೆ ಎಂದು ಹೆದರಿಕೊಂಡು,  ಕಬೀರನಿಂದ ಕೈಬಿಡಿಸಿಕೊಂಡು ಓಡಿ ಹೋಗಿ ರಾಜನ ಕಾಲು ಹಿಡಿದುಕೊಂಡಳು. ಪ್ರಭು ಇದರಲ್ಲಿ ಇವರ ತಪ್ಪೇನೂ ಇಲ್ಲ ನನಗೆ ಹಣಕೊಟ್ಟು ಹೀಗೆ  ನಾಟಕ ಮಾಡುವಂತೆ ಹೇಳಿದ್ದಾರು ಎಂದು ತನ್ನ ತಪ್ಪನ್ನು ಒಪ್ಪಿಕೊಂಡುಳು. 


ರಾಜನಿಗೆ ಎಲ್ಲವೂ ಅರ್ಥವಾಯಿತು. ರಾಜನು ಕಬೀರರನ್ನು ನೋಡುತ್ತಾ,ಅಲ್ಲಾ ಕಬೀರರೇ, ಈ ಹೆಂಗಸು ನಿಮ್ಮ ಹೆಂಡತಿ ಅಲ್ಲ ಎಂದು ನಿಮಗೆ ಗೊತ್ತಿತ್ತು ಆದರೂ ನೀವು ಯಾಕೆ ಹೀಗೆ ನಾಟಕ ಮಾಡಿದಿರಿ? ಪ್ರತಿಭಟನೆ ಮಾಡಬಹುದಿತ್ತು. ಅದಕ್ಕೆ ಕಬೀರರು ಇದು ನಾಟಕ ಎಂದು ನನಗೆ ಅಲ್ಲಿಯೇ ಗೊತ್ತಿತ್ತು. ಇಲ್ಲಿಯೂ ಗೊತ್ತಿದೆ. ಅಲ್ಲಿ ಆರಂಭವಾದ ನಾಟಕ ಇಲ್ಲಿ ಮುಗೀತು.  ಈಗ ನನ್ನ ಮನೆಗೆ ನಾನು ಹೋಗುತ್ತೇನೆ. ಅವಳ ಮನೆಗೆ ಅವಳು ಹೋಗುತ್ತಾಳೆ. ಇದಕ್ಕೆಲ್ಲಾ ಪ್ರತಿಭಟನೆ ಯಾಕೆ? ಎಂದು ಕಬೀರರು ರಾಜನನ್ನೇ ಕೇಳಿದರು. ಕಬೀರರು ತಮ್ಮ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡಿದ್ದರು. ಹೀಗಾಗಿ, ನೋವು ,ದುಃಖ ಅಥವಾ ಸಂತೋಷ  ಇಂತಹ ಯಾವುದರಲ್ಲೂ ಅವರಿಗೆ ವ್ಯತ್ಯಾಸವಿರಲಿಲ್ಲ. ಸ್ಥಿತಪ್ರಜ್ಞರಾಗಿ ಆತ್ಮಪ್ರಜ್ಞೆ ಬೆಳೆಸಿಕೊಂಡ  ಇವರು ಮಹಾನ್ ಸಂತರಾದರು. 


ದು: ಖ್ವೇಷ್ವನುದ್ವಿಗ್ನಮನಾ:

ಸುಖೇಷು ವಿಗತ ಸ್ಪೃ ಹ:

ವೀತ ರಾಗ ಭಯ ಕ್ರೋಧ:

ಸ್ತಿತಧೀರ್ಮುನಿರುಚ್ಯತೇ 


ವಿಪತ್ತಿನಲ್ಲಿ ವಿಚಲಿತನಾಗದೆ , ಸುಖಕ್ಕಾಗಿ ಹಂಬಲಿಸದೆ, ಮೋಹ, ಭಯ ಮತ್ತು ಸಿಟ್ಟಿನಿಂದ ಯಾರು ಮುಕ್ತನಾಗಿರುತ್ತಾನೋ ಅಂತಹ ಮುನಿಯು ಸ್ಥಿತಪ್ರಜ್ಞ ಎನಿಸುತ್ತಾನೆ. 


Courtesy: WhatsApp Message

No comments:

Post a Comment