Saturday, 27 August 2022

ಎರಡು ಮುಖಗಳು

ಪ್ರಾಥಮಿಕ ಶಾಲೆಯೊಂದರ ಗಣಿತದ ತರಗತಿಯಲ್ಲಿ, ಲೆಕ್ಕದ ಪಾಠ ಮಾಡುತ್ತಿದ್ದ ಶಿಕ್ಷಕಿಯೊಬ್ಬರು, ಪುಟ್ಟ ಬಾಲಕನಿಗೆ ಪ್ರಶ್ನೆಯೊಂದನ್ನು ಕೇಳಿದರು.  "ಮಗೂ, ನಿನಗೆ ಎರಡು ದೊಡ್ಡ ಮಾವಿನಹಣ್ಣು ಕೊಡುತ್ತೇನೆ. ಜೊತೆಗೆ ಎರಡು ಚಿಕ್ಕ ಮಾವಿನ ಹಣ್ಣನ್ನು ಕೊಡುತ್ತೇನೆ. ಹಾಗಾದರೆ ನಿನ್ನ ಬಳಿ ಎಷ್ಟು ಹಣ್ಣು ಇರುತ್ತವೆ?"


ಬಾಲಕ ಕ್ಷಣದಲ್ಲಿಯೇ ಉತ್ತರಿಸಿದ, "ಐದು ಮೇಡಂ".


ಉತ್ತರ ಕೇಳಿದ ಶಿಕ್ಷಕಿಗೆ ಆಶ್ಚರ್ಯವಾಯಿತು. ಜೊತೆಗೆ ಗಣಿತದ ಸರಳ ಪ್ರಶ್ನೆಯು ವಿದ್ಯಾರ್ಥಿಗೆ ಇಷ್ಟೊಂದು ಕಷ್ಟವಾಗುತ್ತಿರುವುದು ಕಂಡು ಮರುಕವಾಯಿತು. ಆದರೂ ಪಟ್ಟು ಬಿಡದೆ,


"ನೋಡು ಮಗೂ ಗೊಂದಲ ಮಾಡಿ ಕೊಳ್ಳಬೇಡ. ನಾನು ನಿನಗೆ ಮೊದಲಿಗೆ ಎರಡು, ಆಮೇಲೆ ಎರಡು ಮಾವಿನಹಣ್ಣು ಕೊಡುತ್ತೇನೆ. ನಿನ್ನ ಬಳಿಗೆ ಎಷ್ಟು ಹಣ್ಣು ಇದ್ದಂತಾಯಿತು?" ಎಂದು ಮರು ಪ್ರಶ್ನಿಸಿದರು.


"ಐದೇ ಮೇಡಂ" ಬಾಲಕ ಆತ್ಮವಿಶ್ವಾಸದಿಂದ ಉತ್ತರಿಸಿದ. ಈ ಬಾರಿ  ಸಿಟ್ಟು ಬಂದರೂ ಸಮಾಧಾನದಿಂದ ಮತ್ತೊಮ್ಮೆ, "ಸರಿಯಾಗಿ ಕೇಳಿಸಿಕೋ! ನಿನಗೆ ನಾನು ಮೊದಲಿಗೆ ಎರಡು ಸೇಬನ್ನು, ಆಮೇಲೆ ಇನ್ನೆರಡು ಸೇಬನ್ನು ಕೊಡುತ್ತೇನೆ. ಆಗ ನಿನ್ನ ಬಳಿ ಎಷ್ಟು ಸೇಬು ಇರುತ್ತವೆ?" ಎಂದು ಕೇಳಿದರು. ಆಗ, "ನಾಲ್ಕು ಸೇಬು ಮೇಡಂ" ಎಂದ ಬಾಲಕ. ಸರಿ ಉತ್ತರದಿಂದ ಖುಷಿಯಾದ ಶಿಕ್ಷಕಿಯು ಮೊದಲು ಕೇಳಿದ್ದ ಮಾವಿನ ಹಣ್ಣಿನ ಲೆಕ್ಕವನ್ನೇ ಕೇಳಿದರು. "ಯೋಚಿಸಿ ಹೇಳು.. ಈಗ ನಿನ್ನ ಬಳಿ ಎಷ್ಟು ಮಾವಿನ ಹಣ್ಣುಗಳಿವೆ?" ಎಂದಾಗ, "ಐದು ಮೇಡಂ" ಎಂದ ಬಾಲಕ. ಸಿಟ್ಟಾದ ಶಿಕ್ಷಕಿಯು, "ನಾನು ಕೊಡುವುದೇ ನಾಲ್ಕು ಹಣ್ಣು.. ನಿನ್ನ ಬಳಿ ಐದು ಮಾವಿನಹಣ್ಣು ಹೇಗೆ ಬರುತ್ತದೆ?" ಎಂದಾಗ, ಬಾಲಕನು "ಮೇಡಂ ನೀವು ನಾಲ್ಕು ಕೊಟ್ಟರೂ ನನ್ನ ಬಳಿ ಐದು ಮಾವಿನ ಹಣ್ಣೇ ಇರುತ್ತವೆ. ಏಕೆಂದರೆ ನನ್ನ ಬ್ಯಾಗಿನಲ್ಲಿ ಒಂದು ಮಾವಿನ ಹಣ್ಣು ಇದೆ" ಎಂದನು. ಇದು ಎಲ್ಲೋ ಓದಿದ ಕತೆ.


ಆಗ ಶಿಕ್ಷಕಿಗೆ ತನ್ನ ತಪ್ಪಿನ ಅರಿವಾಯಿತು. ಪ್ರತಿಯೊಂದು ಸಂಗತಿಗೂ ಎರಡು ಮುಖಗಳಿರುತ್ತವೆ. 'ನಾವೇ ಸರಿ, ನಾನು ಅಂದುಕೊಂಡಿರುವುದೇ ಸರಿ' ಎನ್ನುವ ನಿರ್ಧಾರಕ್ಕೆ ಬರಬಾರದು. ಒಂದು ಸಂಗತಿಗೆ ಇರುವ ಇನ್ನೊಂದು ಮುಖದ ಬಗ್ಗೆ ಆಲೋಚನೆ ಮಾಡದೆಯೇ, 'ನಾವು ಹೇಳುತ್ತಿರುವುದೇ ಅಂತಿಮ ಸತ್ಯ' ಎನ್ನುವ ತೀರ್ಮಾನದಿಂದ ಅಪಾಯ ತಪ್ಪಿದ್ದಲ್ಲ. ಕೆಲವೊಮ್ಮೆ ಇದರಿಂದ ಮುಜುಗರಕ್ಕೂ ಸಿಲುಕಬೇಕಾಗುತ್ತದೆ.


ರಾವಣನಿಗೆ ಹತ್ತು ಮುಖಗಳಿದ್ದವು ಅಂದರೆ ಹತ್ತು ಆಯಾಮಗಳು. 'ನಾನೇ ಸರ್ವಜ್ಞ' ಎಂಬ ಭಾವಿಸದೆ, ನಾವು ಹತ್ತು ಮುಖಗಳು ಬೇಡ, ಒಂದು ಸಂಗತಿಗಿರುವ ಎರಡು ಮುಖಗಳನ್ನಾದರೂ ಒಪ್ಪಿಕೊಳ್ಳೋಣ, ಅರ್ಥ ಮಾಡಿಕೊಳ್ಳೋಣ. ನಮ್ಮ ಅಂತಃ ಪ್ರಜ್ಞೆಯನ್ನು ಎಚ್ಚರಗೊಳಿಸಿ, ಪ್ರತಿಯೊಂದು ವಿಷಯವನ್ನೂ ಜಾಗೃತಾವಸ್ಥೆಯಲ್ಲಿ ಗಮನಿಸೋಣ. ಪ್ರಜ್ಞಾಪೂರ್ವಕವಾದ ಬದುಕು ನಮ್ಮದಾಗಿಸಿಕೊಳ್ಳೋಣ.


ಶ್ರೀಕೃಷ್ಣಾರ್ಪಣಮಸ್ತು

No comments:

Post a Comment