Saturday, 3 September 2022

ಶ್ರೀಸುಶಮೀಂದ್ರತೀರ್ಥರು



ನಮ್ಮ ಮತದ ಸತ್ಪರಂಪರೆಯಲ್ಲಿ ಸಾಕ್ಷಾತ್ ಪರಮಾತ್ಮನಿಂದ ಪ್ರಾರಂಭಿಸಿ ವಾಯುದೇವರ ಅವತಾರಿಗಳಾದ  ಶ್ರೀಮದಾಚಾರ್ಯರು,ಮೂರು ಲೋಕದ ಒಡೆಯರಾದ ಇಂದ್ರದೇವರ ಅವತಾರಿಗಳಾದ  ಶ್ರೀಜಯತೀರ್ಥರಂತಹ ಮಹನೀಯರಿಂದ ಮೊದಲುಗೊಂಡು ಅನೇಕ ದೇವತೆಗಳು, ಗಂಧರ್ವರು, ಋಷಿಗಳು ಬಂದು ಶ್ರೀಮದಾಚಾರ್ಯರ, ಮತ್ತು ಶ್ರೀವೇದವ್ಯಾಸದೇವರ ಅಪಾರ ಸೇವೆಯನ್ನು ಮಾಡಿ, ನಮ್ಮೆಲ್ಲರನ್ನು ಉದ್ಧಾರದ ಮಾರ್ಗದಲ್ಲಿ ನಡೆಸುತ್ತಿದ್ದಾರೆ. 

ಇಷ್ಟೆಲ್ಲಾ ದೊಡ್ಡ ದೇವತೆಗಳು ನಮ್ಮ ಪರಂಪರೆಯಲ್ಲಿ ಬಂದದ್ದಲ್ಲದೇ ಅವರದ್ದೇ ಆದ ವಿಶೇಷತೆಗಳು ಇವೆ. ಅದರಲ್ಲೂ ಭಗವಂತನ ಮತ್ತು ವಾಯುದೇವರ ವಿಶೇಷಾನುಗ್ರಹಕ್ಕೆ ಪಾತ್ರರಾದ, ಅವರಿಬ್ಬರ ನಿತ್ಯ ಸನ್ನಿಧಾನವುಳ್ಳ  ಶ್ರೀಪ್ರಹ್ಲಾದ ದೇವತೆಗಳ ಅವತಾರಿಗಳಾದ, ಕಲಿಯುಗದಲ್ಲಿ ಇವರನ್ನು ನಂಬಿದರೆ, ಅನುಸರಿಸಿದರೆ, ಭಕ್ತಿ ಮಾಡಿದರೆ ಮಾತ್ರ ನನ್ನನ್ನು ಸೇರಲಿಕ್ಕೆ ಸಾಧ್ಯ ಅಂತ ಶ್ರೀನರಸಿಂಹದೇವರಿಂದ ಅನುಗ್ರಹ ಪಡೆದುಕೊಂಡ ಮಂತ್ರಾಲಯ ಪ್ರಭುಗಳು ಸಕಲ ಭಕ್ತರ ಗುರುಗಳಾಗಿದ್ದಾರೆ. ಇವರ ಮಹಿಮೆಯನ್ನು ಯಾರಿಗೆ ತಾನೇ ಪೂರ್ಣವಾಗಿ ವರ್ಣಿಸಲು ಶಕ್ಯ! ಇಂತವರು ಒಬ್ಬ ಸಾಮಾನ್ಯ ಭಕ್ತರ  ಮೇಲೆ ಅನುಗ್ರಹಿಸಿದರೆ ಏನೆಲ್ಲಾ ಆಗುತ್ತವೆ ಅನ್ನುವುದನ್ನು ನೋಡೋಣ.


ಒಬ್ಬ ಸಾಮಾನ್ಯ ಮನುಷ್ಯ, ಶಾಸ್ತವಾಗಲಿ, ಲೌಕಿಕವಾಗಲೀ ಅಷ್ಟೇನೋ ಬಲ್ಲವನಲ್ಲ. ಆದರೆ ರಾಯರೆಂದರೆ, ನಮ್ಮ ಪರಂಪರೆ ಅಂದರೆ ಅದೇನೋ ಭಕ್ತಿ, ಶ್ರದ್ಧೆ.ತಕ್ಕ ಮಟ್ಟಿಗೆ ಸದಾಚಾರಿಗಳು.  ಒಂದು ರಾಯರ ಮಠದಲ್ಲಿ ಕಟ್ಟೆಯ ಮೇಲೆ ಕೂತು ಬಂದ ಭಕ್ತರಿಗೆ ತೀರ್ಥ ಮಂತ್ರಾಕ್ಷತೆ ಕೊಡುತ್ತಿದ್ದರು. ಮಠಕ್ಕೆ ಎಂದಿನಂತೆ ನಿತ್ಯ ಬರುವ ಭಕ್ತರಲ್ಲಿ ಒಬ್ಬ ಸದಾಚಾಯಾದ ಮುತ್ತೈದೆ ಬಂದು ರಾಯರಿಗೆ ನಮಸ್ಕರಿಸಿ, ಅಷ್ಟೇನೂ ಸದಾಚಾರಿಗಳಲ್ಲದ ಇವರಿಂದ ತೀರ್ಥ ಮಂತ್ರಾಕ್ಷತೆ  ಹೇಗೆ ಸ್ವೀಕರಿಸಬೇಕು ಅಂತ ಯೋಚಿಸಿ, ನಿಮ್ಮಿಂದ ನಾನೂ ತೀರ್ಥ ಸ್ವೀಕರಿಸುವುದಿಲ್ಲ ಅಂತ ಅವರಿಗೆ ಹೇಳಿಯೂ ಬಿಟ್ಟರು.(ಸಕಲವೂ ದೇವರ ಪ್ರೇರಣೆ). 

ಆಗ ಆವ್ಯಕ್ತಿಗೆ ಅದೇನು ಆವೇಶ ಬಂದಿತೋ ಅಥವಾ ಒಳಗೆ ರಾಯರೇ ನಿಂತು ತಮ್ಮ ಕೂಸಿನ ಮುಖಾರವಿಂದದಿಂದ ನುಡಸಿದರೋ ಏನೋ ಎಂಬಂತೆ *"ನೀವು ಈದಿನ‌‌ ನನ್ನ ಕೈಯಿಂದ ತೀರ್ಥ ಸ್ವೀಕರಿಲ್ಲ ಅಂತ ಹೇಳಿದ್ರಿ, ಆದರೆ ಒಂದು ದಿನ ಇಡೀ ಭಕ್ತಾದಿಗಳಿಗೆ ತೀರ್ಥವನ್ನು ಕೊಡು ಯೋಗ್ಯತೆಯನ್ನು ರಾಯರು ನನಗೆ ಕರುಣಿಸುತ್ತಾರೆ, ನೀವೇ ಬಂದು ನನ್ನಿಂದ ತೀರ್ಥ ಸ್ವೀಕರಿಸುತ್ತೀರಿ* ಅಂತ ಹೇಳಿದ ಆ ಸುಸಮಯದಲ್ಲಿ ಬಹುಷಃ ಮೇಲಿಂದ ಸಕಲ ದೇವತೆಗಳೂ ತತಾಸ್ತು ಅಂದಿರಬೇಕು. ಆ ಮುಗ್ಧ ಭಕ್ತಿಯನ್ನು ರಾಯರ ಮೇಲೆ ಹೊಂದಿದ್ದ ಆ ವ್ಯಕ್ತಿಯ ಮಾತನ್ನು ಸತ್ಯ ಮಾಡಲೆಂದು, ಆ ವ್ಯಕ್ತಿಯನ್ನು ರಾಯರು ತಾವು ಬಂದ ಹಂಸನಾಮಕನ ಪರಂಪರೆಯಲ್ಲೇ ಕೂಡಿಸಿ, ತಾವೇ ಅವರಲ್ಲಿ ನಿಂತು ಲಕ್ಷಾಂತರ ಭಕ್ತರನ್ನು ಅನುಗ್ರಹಿಸಿ ಉದ್ಧರಿಸಿದ್ದಾರೆ. ಆ ಸಾಮಾನ್ಯ ಭಕ್ತನೇ ಮುಂದೆ ಶ್ರೀಸುಜಯೀಂದ್ರ ತೀರ್ಥರ ಕರಕಮಲ ಸಂಜಾತರಾದ,ಪ್ರಸ್ತುತ ಆರಾಧನಾ ನಾಯಕರಾದ, ಲೋಕದಲ್ಲಿ ನಡೆದಾಡುವ ರಾಯರು ಅಂತಲೇ ಪ್ರಸಿದ್ಧರಾದ ಶ್ರೀಸುಶಮೀಂದ್ರತೀರ್ಥ ಶ್ರೀಪಾದಂಗಳವರು.

ಮುಂದೆ ನಡೆದದ್ದೆಲ್ಲಾ ಇತಿಹಾಸ, ಎಲ್ಲರಿಗೂ ಗೊತ್ತಿರುವ ವಿಚಾರ. 

ಅವರು ನುಡಿದದ್ದೆಲ್ಲಾ ನಿಜವಾಯಿತು, ಮುಟ್ಟಿದ್ದೆಲ್ಲಾ ಬಂಗಾರವಾಯಿತು. ಅನುಗ್ರಹ ಪಡೆದವರೆಲ್ಲಾ ಮಹಾನ್ ವ್ಯಕ್ತಿಗಳಾದರು.ಅವರಿಂದ ಲೋಕಕ್ಕಾದ ಉಪಕಾರಗಳು ಎಷ್ಟು ಅಂತ ಹೇಳಲಿಕ್ಕೆ ಸಾಧ್ಯ! 

ಮಂತ್ರಾಕ್ಷತೆ ಅವರ ಕೈಯಿಂದ ಸಿಕ್ಕರೆ ಸಾಕು, ನಮ್ಮ ಇಷ್ಟಾರ್ಥಗಳು ನೆರವೇರುತ್ತವೆ ಅನ್ನುವ ಭಕ್ತರ ನಂಬಿಕೆ, ಅದಕ್ಕೆಂದೇ ಭಕ್ತಾದಿಗಳು ಅವರನ್ನು ಎಲ್ಲಿಗೆ ಹೋದರೂ ಬಿಡದೇ, ಮಠ ಮತ್ತು ಮತಗಳನ್ನೂ ಲೆಕ್ಕಿಸದೇ ಮುಧ್ರಧಾರಣೆ, ಪಾದ ಪೂಜೆ, ಮಂತ್ರಾಕ್ಷತೆಗಾಗಿ ಕಾದು ಕುಳಿತಿರುತ್ತಿದ್ದರು. ಆ ಮಂದಹಾಸ, ಮುಖದಲ್ಲಿ ಸದಾ ಇದ್ದ ಮುಗ್ಧ ನಗು ಇವುಗಳನ್ನು ನೋಡಲು ಭಕ್ತರು ಸದಾ ಇಚ್ಛೆ ಪಡುತ್ತಿದ್ದರು. ಇನ್ನೂ ಅವರು ಮಾಡುತ್ತಿದ್ದ ಸಂಸ್ಥಾನ ಪೂಜೆಯಂತೂ ನಿಜಕ್ಕೂ ಪರಮಾದ್ಭುತ. ಶ್ರೀಮೂಲ, ದಿಗ್ವಿಜಯ ಮತ್ತು ಜಯರಾಮ ದೇವರ ಪೂಜಾ ವೈಭವ ವರ್ಣನಾತೀತ. ನೋಡಿದವರೇ ನಿಜಕ್ಕೂ ಧನ್ಯರು.🙏🏻

ಯಾವುದೇ ಸಭೆಯಾಗಲೀ ಅವರ ಉಪಸ್ಥಿತಿ ಇಲ್ಲದೇ ಪೂರ್ಣವಾಗುತ್ತಲೇ ಇರಲಿಲ್ಲ. ಅದು ಬೃಹತ್ ಯಾಗಗಳಾಗಿರಬಹುದು, ಸುಧಾಮಂಗಳವೇ ಆಗಿರಬಹುದು ಅಲ್ಲಿ ಶ್ರೀಸುಶಮೀಂದ್ರ ತೀರ್ಥರು ಇರಲೇಬೇಕು.

ಅವರ ಅನುಗ್ರಹದ ಕೃಪಾ ದೃಷ್ಟಿ ಆ ಸುಧಾ ಪರೀಕ್ಷೆ ಕೊಡುವ ಪಂಡಿತರ ಮೇಲೆ ಒಮ್ಮೆ ಬಿದ್ದರೂ ಸಾಕು ಆ ಪಂಡಿತರೇ ಧನ್ಯ. ಆ ಕೃಪಾ ದೃಷ್ಟಿಗೆ ಎಲ್ಲರೂ ಹಂಬಲಿಸುತ್ತಿದ್ದರು. 

ಅವರಿಂದ ಪ್ರತಿಷ್ಠಾಪಿಸಲ್ಪಟ್ಟ ರಾಯರ ಬೃಂದಾವನಗಳೂ ಸುಮಾರು ನೂರರ ಮೇಲಿವೆ, ಯಾವುದೇ ಊರಲ್ಲಾಗಲೀ, ಯಾವುದೇ ಬಡಾವಣೆಯಾಗಲೀ ರಾಯರ ಮಠವಾದರೆ ಅದು ಶ್ರೀಸುಶಮೀಂದ್ರರಿಂದಲೇ ಪ್ರತಿಷ್ಠಾಪನೆಗೊಳ್ಳಬೇಕು ಅನ್ನುವುದು ಎಲ್ಲರ ಆಸೆ. ಪ್ರಾರ್ಥಿಸಿದರೆ ಸಾಕು , ಸಂತೋಷದಿಂದ ಒಪ್ಪಿ, ಎಷ್ಟೇ ಕಷ್ಟವಾದರೂ ಬಂದು ಪ್ರತಿಷ್ಠಾಪನೆ ಮಾಡುತ್ತಿದ್ದರು. ನಮ್ಮ ಕಾಲದಲ್ಲಿ ಬಹುಷಃ ಎಲ್ಲರೂ ಒಂದಲ್ಲ ಒಂದು ರೀತಿ  ಅವರಿಂದ ಅನುಗ್ರಹ ಪಡೆದವರೇ ಆಗಿದ್ದೇವೆ. ಮುಂದೆ ಯಮಧೂತರು ನೀನು ಮಾಡಿದ ಸಾಧನೆ ಏನೂ ಅಂತ ಕೇಳಿದರೆ, ಏನಾದರೂ ಮಾಡಿದ್ದರೂ, ಮಾಡದಿದ್ದರೂ ಸಹ ನಾನು ಶ್ರೀಸುಶಮೀಂದ್ರತೀರ್ಥರ ದರ್ಶನ ಮಾಡಿದ್ದೇನೆ, ಅವರಿಂದ ಮಂತ್ರಾಕ್ಷತೆ ಸ್ವೀಕರಿಸಿದ್ದೇನೆ, ಇದೇ ನನ್ನ ಸಾಧನೆ ಅಂತ ಧೈರ್ಯವಾಗಿ ಹೇಳಿದರೆ ಸಾಕು, ಅಲ್ಲಿಯೂ ಅವರ, ರಾಯರ ವಿಶೇಷ ಅನುಗ್ರಹವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. 

ಅವರ ಬಗ್ಗೆ ಹೇಳುವುದು ಸಾಗರದಷ್ಟಿದೆ ಆದರೆ ಹೇಗೆ ಸಾಗರಕ್ಕೆ ಹೋಗಿ ಪೂರ್ತಿ ನೀರಲ್ಲಿ ಮುಳುಗುವುದಕ್ಕೆ ಸಾಧ್ಯವಿಲ್ಲವೋ ಹಾಗೆಯೇ ಇವರ ಬಗ್ಗೆ  ಹೇಳುವುದಕ್ಕೆ ಸಾಧ್ಯವಿಲ್ಲ. ಆದರೂ ಹೇಗೆ ಒಂದು ದಡದಲ್ಲಿ ನಿಂತು ಮುಳುಗಿದರೂ ಪೂರ್ತಿ ಸಮುದ್ರ ಸ್ನಾನದ ಫಲ ಸಿಗುತ್ತದೆಯೋ ಹಾಗೆಯೇ ಶ್ರೀಸುಶಮೀಂದ್ರರ ಬಗ್ಗೆ ಸ್ವಲ್ಪ ತಿಳಿದರೂ ಅವರ ಪೂರ್ಣ ಅನುಗ್ರಹವಾಗಿ , ಅವರ ಅಂತರ್ಯಾಮಿ ಶ್ರೀರಾಯರ, ಶ್ರೀಜಯತೀರ್ಥರ, ಶ್ರೀಮದಾಚಾರ್ಯರ , ಶ್ರೀಮನ್ಮೂಲರಾಮದೇವರ ಸಂಪೂರ್ಣ ಅನುಗ್ರಹ ಸಿಗುತ್ತದೆ. ಇಂತಹ ಶ್ರೀಸುಶಮಿಂದ್ರತೀರ್ಥರ ಸ್ಮರಣೆ ಜನ್ಮಜನ್ಮಗಳಲ್ಲೂ ಸಿಗಲಿ ಅಂತ ಅವರ ಅಂತರ್ಯಾಮಿಯಲ್ಲಿ ಭಕ್ತಿಯಿಂದ ಪ್ರಾರ್ಥಿಸೋಣ. 🙏🏻🙏🏻

No comments:

Post a Comment